ನೈಮ, ಮುಸ್ತಾಫ
1655-1716. ತುರ್ಕಿ ಇತಿಹಾಸಕಾರ. ಸಿರಿಯದ ಅಲೆಪ್ಪೊದಲ್ಲಿ ಜನಿಸಿದ; ಗ್ರೀಸಿನ ಪೆಲೊಪೊನೀಸಿನಲ್ಲಿ ನಿಧನ ಹೊಂದಿದ. ಇವನು ಚಿಕ್ಕ ವಯಸ್ಸಿನಲ್ಲೇ ಇಸ್ತಾಂಬುಲ್‍ಗೆ ಹೋಗಿ ನೆಲಸಿ ಅರಮನೆಯಲ್ಲಿ ನೌಕರಿ ಹಿಡಿದು ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ. ಮಹಾ ವಜೀರನಾಗಿದ್ದ ಹ್ಯುಸೆಯ್ನ್ ಪಾಷನ ಪ್ರೋತ್ಸಾಹದಿಂದ 1709ರಲ್ಲಿ ಅಧಿಕೃತ ಉದಂತಕಾರನಾಗಿ ನೇಮಕ ಹೊಂದಿದ.

ತಾರಿಹ್ (ಉದಂತ) ಎಂಬುದು 1591-1659ರ ಅವಧಿಯ ತುರ್ಕಿ ಸಾಮ್ರಾಜ್ಯದ ಇತಿಹಾಸ. ಅದರಲ್ಲಿ ಇವನು ತನ್ನ ಹಿಂದಿನ ಉದಂತಕಾರರ ಕೃತಿಗಳನ್ನು ಸಂಗ್ರಹಿಸಿ ಜೊತೆಗೆ ತನ್ನ ವ್ಯಾಖ್ಯಾನವನ್ನೂ ಸೇರಿಸಿದ್ದಾನೆ. ಆಕಾರಗಳನ್ನು ವಸ್ತುನಿಷ್ಠೆಯಿಂದ ವಿಮರ್ಶಿಸುವುದೂ ಪ್ರಶಂಸೆಯಲ್ಲಿ ತೊಡಗದಿರುವುದೂ ನೇರ ಸರಳ ಶೈಲಿಯನ್ನು ಬಳಸುವುದೂ ಇತಿಹಾಸಕಾರನ ಗುರಿಯಾಗಬೇಕು ಎಂದು ಇವನು ಹೇಳಿದ್ದಾನೆ. ಅದರಂತೆಯೇ ತನ್ನ ಕೃತಿಯನ್ನು ರಚಿಸಿದ್ದಾನೆ. ಈ ಕೃತಿ 1730ರಲ್ಲಿ ಎರಡು ಸಂಪುಟಗಳಲ್ಲಿ ಹೊರಬಂತು. 1884ರಲ್ಲಿ ಆರು ಸಂಪುಟಗಳಲ್ಲಿ ಮತ್ತೆ ಪ್ರಕಟವಾಯಿತು.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ